ಕೋಲ್‍ಬ್ರೂಕ್, ಹೆನ್ರಿ ಥಾಮಸ್
1765-1837. ಆಂಗ್ಲ ವಿದ್ವಾಂಸ, ಪ್ರಥಮವರ್ಗದ ಪ್ರಾಚ್ಯಶಾಸ್ತ್ರಜ್ಞ. ಸಂಸ್ಕøತವನ್ನು ಹಸ್ತಗತಮಾಡಿಕೊಂಡು ತನ್ಮೂಲಕ ಭಾರತೀಯ ನ್ಯಾಯಶಾಸ್ತ್ರಾದಿಗಳನ್ನು ವ್ಯಾಸಂಗಮಾಡ ಹೊರಟ ಐರೋಪ್ಯ ವಿದ್ವಾಂಸರಲ್ಲಿ ಮೊದಲಿಗ. ಈತ ಜಾರ್ಜ್ ಕೋಲ್‍ಬ್ರೂಕನ ಮಗ. ಹುಟ್ಟಿದ್ದು ಲಂಡನ್ನಿನಲ್ಲಿ. ಚಿಕ್ಕಂದಿನಿಂದಲೂ ವಿದ್ಯೆಯಲ್ಲಿ ಆಸಕ್ತಿಯುಳ್ಳ ಈತ ತನ್ನ ಹದಿನೇಳನೆಯ ವಯಸ್ಸಿನಲ್ಲೇ ವಿಶ್ವವಿದ್ಯಾಲಯದ ಪದವೀಧರನಿಗರಬೇಕಾದಷ್ಟು ಜ್ಞಾನವನ್ನು ಸಂಪಾದಿಸಿಕೊಂಡಿದ್ದ.

ಈತ 1782ರಲ್ಲಿ ಭಾರತಕ್ಕೆ ಬಂದು ಬಂಗಾಳದ ಸಿವಿಲ್ ಸರ್ವಿಸ್ಸಿನಲ್ಲಿ ಕೆಲಸಕ್ಕೆ ಸೇರಿ ಕೆಲ ಕಾಲದಲ್ಲಿಯೇ ರೆವಿನ್ಯೂ ಅಧಿಕಾರಿಯಾದ. ಆ ಸಮಯದಲ್ಲಿ ರಿಮಾಕ್ರ್ಸ ಆನ್ ದಿ ಹಸ್ಬೆಂಡ್ರಿ ಅಂಡ್ ಕಾಮರ್ಸ್ ಆಫ್ ಬೆಂಗಾಲ್ ಎಂಬ ಗ್ರಂಥವನ್ನು ಬರೆದ. ಈಸ್ಟ್ ಇಂಡಿಯ ಕಂಪನಿಯ ಸೇವಾವೃತ್ತಿಯಲ್ಲಿದ್ದರೂ ತನ್ನ ಲೇಖನದಲ್ಲಿ ಸರ್ಕಾರದ ವಾಣಿಜ್ಯನೀತಿಯನ್ನು ಕುರಿತು ಕಟುವಾಗಿ ಟೀಕಿಸಿರುವುದು ಈತನ ನಿಷ್ಪಕ್ಷಪಾತಬುದ್ಧಿಗೆ ನಿದರ್ಶನವಾಗಿದೆ. ಈ ಗ್ರಂಥ ಇಂಗ್ಲೆಂಡಿನಲ್ಲಿ ಪ್ರಕಟವಾಗಲಿಲ್ಲ. ಇದನ್ನು ಕೋಲ್‍ಬ್ರೂಕನೇ ಖಾಸಗಿಯಾಗಿ ಭಾರತದಲ್ಲಿ ಪ್ರಕಟಿಸಿದ (1795).

ಭಾರತದಲ್ಲಿ ಸಮರ್ಥಶಾಲಿ ಅಧಿಕಾರಿ ಎನ್ನಿಸಿಕೊಳ್ಳಬೇಕಾದರೆ ಭಾರತೀಯ ಸಂಸ್ಕøತಿಯ ಪರಿಚಯ ಸಂಸ್ಕøತ ಭಾಷೆಯ ಜ್ಞಾನ ಅತ್ಯಂತ ಅವಶ್ಯಕವೆಂದು ಮನಗಂಡ ಈತ ಸಂಸ್ಕøತಭಾಷಾಧ್ಯಯನವನ್ನು ಆರಂಭಿಸಿ ಅಲ್ಪಕಾಲದಲ್ಲಿಯೆ ಸಂಸ್ಕøತಭಾಷೆಯ ಮೇಲೆ ಹತೋಟಿ ಪಡೆದ. ಅದೇ ಸಮಯದಲ್ಲಿ ಸರ್ ವಿಲಿಯಂ ಜೋನ್ಸ್ ಸಿದ್ಧಪಡಿಸಿದ್ದ ಭಾರತೀಯ ನ್ಯಾಯಶಾಸ್ತ್ರ ಗ್ರಂಥವನ್ನು ಎ ಡೈಜೆಸ್ಟ್ ಆಫ್ ಹಿಂದೂ ಲಾ ಆನ್ ಕಾನ್‍ಟ್ರ್ಯಾಕ್ಟ್ಸ್ ಅಂಡ್ ಸಕ್ಸೆಷನ್ಸ್ (1798) ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರಿಸಿದ. ಇದರಿಂದ ಈತನ ಕೀರ್ತಿ ಎಲ್ಲೆಲ್ಲಿಯೂ ಹರಡಿತು. ಆಗ ಈತ ಬರೆದ ಅನೇಕ ಲೇಖನಗಳು ಏಷ್ಯಾಟಿಕ್ ರಿಸರ್ಚ ಪತ್ರಿಕೆಯಲ್ಲಿ ಪ್ರಕಟವಾಗಿವೆ.

1801ರಲ್ಲಿ ಕೋಲ್‍ಬ್ರೂಕ್ ಕಲ್ಕತ್ತೆಯ ಹೊಸ ನ್ಯಾಯಾಲಯದ ನ್ಯಾಯಾಧೀಶನಾಗಿ ನೇಮಕಗೊಂಡ. ಅದೇ ಸಮಯದಲ್ಲಿ (1805) ಈತ ತನ್ನ ವಿರಾಮ ಕಾಲದಲ್ಲಿ ಕಲ್ಕತ್ತೆಯ ಫೋರ್ಟ್ ವಿಲಿಯಂ ಕಾಲೇಜಿನಲ್ಲಿ ವೇತನರಹಿತ ಸಂಸ್ಕøತ ಪ್ರಾಧ್ಯಾಪಕನಾಗಿ ಕೆಲಸ ಮಾಡತೊಡಗಿದ್ದನ್ನು ನೋಡಿದರೆ ಈತನಿಗೆ ಸಂಸ್ಕøತದ ಬಗ್ಗೆ ಇದ್ದ ಅಪಾರ ಆಸಕ್ತಿ ವ್ಯಕ್ತವಾಗುತ್ತದೆ. ಆ ಕಾಲದಲ್ಲೀತ ಸಂಸ್ಕøತ ವ್ಯಾಕರಣವನ್ನು ಬರೆದನಲ್ಲದೆ ಪಾಣಿನಿಯ ವ್ಯಾಕರಣ, ಅಮರಕೋಶ ಮತ್ತಿತರ ಕೆಲವು ಸಂಸ್ಕøತ ಕೋಶಗಳು, ಹಿತೋಪದೇಶ ಮತ್ತು ಕಿರಾತಾರ್ಜುನೀಯಗಳನ್ನು ಪರಿಷ್ಕರಿಸಿದ. ಜೊತೆಗೆ ಅನೇಕ ಶಾಸನಗಳನ್ನು ಪರಿಷ್ಕರಿಸಿ ಇಂಗ್ಲಿಷಿಗೆ ಭಾಷಾಂತರಿಸಿದ.
1807ರಲ್ಲಿ ಕೋಲ್‍ಬ್ರೂಕ್ ಸುಪ್ರೀಂ ಕೌನ್ಸಿಲ್ಲಿನ ಸದಸ್ಯನಾಗಿ ನೇಮಕಗೊಂಡ. ಈತ ಬರೆದ ಎಸ್ಸೆ ಆನ್ ದಿ ವೇದಾಸ್ ಎಂಬ ಲೇಖನ ಮೊದಲ ಬಾರಿಗೆ ಯೂರೋಪಿಯನ್ನರಿಗೆ ಭಾರತೀಯ ಪ್ರಾಚೀನ ಸಾಹಿತ್ಯ ಮತ್ತು ಸಂಸ್ಕøತಿಗಳ ಪರಿಚಯವನ್ನು ಮಾಡಿಕೊಟ್ಟಿತು. ಐದು ವರ್ಷಗಳಾದ ಮೇಲೆ ಈತ ಸುಪ್ರೀಂ ಕೌನ್ಸಿಲ್ ಸದಸ್ಯತ್ವವನ್ನು ತ್ಯಜಿಸಿ ಪುನಃ ತನ್ನ ಸಾಹಿತ್ಯ ಸೇವೆಯನ್ನು ಪ್ರಾರಂಭಿಸಿದ. 1810ರಲ್ಲಿ ಜೀಮೂತವಾಹನನ ದಾಯಭಾಗವನ್ನೂ ಅದೇ ವಿಷಯವನ್ನು ಕುರಿತ ಮಿತಾಕ್ಷರದ ಕೆಲವು ಭಾಗಗಳನ್ನೂ ಇಂಗ್ಲಿಷಿಗೆ ಭಾಷಾಂತರಿಸಿದೆ.
ಕೋಲ್‍ಬ್ರೂಕನಿಗಿದ್ದ ಜ್ಞಾನದಾಹ ಅಪರಿಮಿತವಾದುದು. ಭಾಷಾಶಾಸ್ತ್ರ, ಖಗೋಳಶಾಸ್ತ್ರ, ಧರ್ಮಶಾಸ್ತ್ರ, ಗಣಿತಶಾಸ್ತ್ರಗಳಲ್ಲದೆ ಸಾಂಖ್ಯ, ನ್ಯಾಯ, ವೈಶೇಷಿಕ, ಮೀಮಾಂಸಾ ಮತ್ತು ವೇದಾಂತಶಾಸ್ತ್ರಗಳೆಲ್ಲವುಗಳಲ್ಲೂ ಈತ ಸಾಕಷ್ಟು ಪರಿಶ್ರಮ ಪಡೆದಿದ್ದ.

1814ರಲ್ಲಿ ಇಂಗ್ಲೆಂಡಿಗೆ ಹಿಂತಿರುಗುವಾಗ ಕೋಲ್‍ಬ್ರೂಕ್ ತಾನು ಹತ್ತು ಸಾವಿರ ಪೌಂಡ್ ವೆಚ್ಚಮಾಡಿ ಸಂಗ್ರಹಿಸಿದ್ದ ಭಾರತದ ಅನೇಕ ಪ್ರಾಚೀನ ತಾಲಪತ್ರ ಗ್ರಂಥ, ಲೇಖನಗಳನ್ನು ಈಸ್ಟ್ ಇಂಡಿಯ ಕಂಪನಿಗೆ ಕೊಟ್ಟ. ಈ ಗ್ರಂಥರಾಶಿ ಲಂಡನ್ನಿನ ಇಂಡಿಯ ಆಫೀಸ್ ಗ್ರಂಥಾಲಯದಲ್ಲಿ ಇಂದಿಗೂ ಅತ್ಯಮೂಲ್ಯ ನಿಧಿಯಾಗಿ ಇದೆ. 			 (ಸಿ.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ